‘ನೀನು ಕ್ಲಾಸ್‌ಗೆ ಬಂದರೆ ನಾನು ಶಾಲೆಗೆ ಬರಲ್ಲ’: ವಾಲ್ಮೀಕಿ ಸಮುದಾಯದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗಿಟ್ಟ ಶಿಕ್ಷಕಿ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ನಕಹಾ ಬ್ಲಾಕ್ ವ್ಯಾಪ್ತಿಯ ಪತ್ರಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯ ದಲಿತ ವಿದ್ಯಾರ್ಥಿಯೊಬ್ಬ ಶಿಕ್ಷಕಿಯೊಬ್ಬರಿಂದ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯನ್ನು ಎದುರಿಸುತ್ತಿರುವ ಕುರಿತು ಗಂಭೀರ ಆರೋಪ ಕೇಳಿಬಂದಿದೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಕೃಷ್ಣ ಎಂಬ ವಿದ್ಯಾರ್ಥಿ ಈ ಆರೋಪ ಮಾಡಿದ್ದು, ಶಿಕ್ಷಕಿಯು ತನ್ನನ್ನು ತರಗತಿಯಲ್ಲಿ ಕೂರಲು ಬಿಡುತ್ತಿಲ್ಲ, ಪಾಠ ಮಾಡುತ್ತಿಲ್ಲ ಮತ್ತು ತನ್ನಿಂದ ದೂರವಿರುವಂತೆ ತಾಕೀತು ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ.

ತರಗತಿಗೆ ಬಂದರೆ ತಾನು ಶಾಲೆಯಲ್ಲಿ ಇರುವುದಿಲ್ಲವೆಂದು ಶಿಕ್ಷಕಿ ಬೆದರಿಸುತ್ತಿದ್ದು, ವಾಲ್ಮೀಕಿ ಸಮುದಾಯದಲ್ಲಿ ಜನಿಸಿದ್ದೇ ತನ್ನ ಏಕೈಕ ‘ತಪ್ಪು’ ಎಂಬಂತಾಗಿದೆ ಎಂದು ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾನೆ. ಇದರಿಂದ ತನ್ನ ವಿದ್ಯಾಭ್ಯಾಸ ಮತ್ತು ಮನೋಸ್ಥೈರ್ಯಕ್ಕೆ ತೀವ್ರ ಧಕ್ಕೆಯಾಗಿದೆ ಎಂದು ಆತ ತಿಳಿಸಿದ್ದಾನೆ.

ಈ ಆರೋಪಗಳು ಸಾಬೀತಾದರೆ ಇದು ಶಿಕ್ಷಣ ಹಕ್ಕು, ಸಮಾನತೆಯ ಹಕ್ಕು ಮತ್ತು ಸಂವಿಧಾನದ ಆಶಯಗಳ ಸ್ಪಷ್ಟ ಉಲ್ಲಂಘನೆಯಾಗಲಿದ್ದು, ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜಸ್ಥಾನದ ಭಾರತೀಯ ಆದಿವಾಸಿ ಪಕ್ಷದ (ಬಿಎಪಿ) ಮಾಧ್ಯಮ ಉಸ್ತುವಾರಿ ಅಶ್ಮಿತ್ ಸೋನಿ ಅವರು ಕೃಷ್ಣನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಉತ್ತರ ಪ್ರದೇಶ ಪೊಲೀಸರಿಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಜಾತಿ ನಿಂದನೆ ಮಾಡಿ ಮಗುವನ್ನು ತರಗತಿಯಿಂದ ಹೊರಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೋರಲಾಗಿದೆ.

ಶಾಲೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಶಿಕ್ಷಣ ಹಕ್ಕು ಕಾಯ್ದೆ 2009 ರ ಪ್ರಕಾರ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಇದು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಪೊಲೀಸರು ತನಿಖೆ ನಡೆಸಿ ವಿದ್ಯಾರ್ಥಿಯ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ವಹಿಸುವುದು ಅಗತ್ಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು